ದೇಶ
ಈ ಪದಕ್ಕೆ ಸಾಮಾನ್ಯವಾಗಿ ಜಾಗ, ಸ್ಥಳ ಎಂದು ಅರ್ಥ.  ಭೌಗೋಳಿಕ ವಿಭಾಗವನ್ನು ಹೇಳುವ ಪ್ರದೇಶ ಎಂಬ ಅರ್ಥದಿಂದಲೂ ರಾಜ್ಯ ಶಾಸನಕ್ಕೆ ಸಂಬಂಧಪಟ್ಟ ವಿಭಾಗವನ್ನು ಗುರುತಿಸಲೂ ಧರ್ಮಾಚರಣೆಗೆ ಸಂಬಂಧ ಪಟ್ಟಂತೆ ಜಾಗವನ್ನು ಗುರುತಿಸಲೂ ಇದೇ ಪದವನ್ನು ಪ್ರಯೋಗಿಸುತ್ತಾರೆ.  ಆದರೆ ಮೌಲಿಕವಾಗಿ ಈ ಪದಕ್ಕೆ ಜನಪದ - ಎಂದರೆ ಜನರು ವಾಸಮಾಡುವ ಜಾಗ ಗ್ರಾಮಸಮುದಾಯ ಎಂಬ ಅರ್ಥವಿದೆ.

ಹಿಂದಿನ ಕಾಲದಲ್ಲಿ ಭಾರತವನ್ನು ಅಂಗ, ವಂಗ, ಕಳಿಂಗ, ಮುಂತಾದ 56 ರಾಜ್ಯಗಳನ್ನಾಗಿ ವಿಂಗಡಿಸಿದ್ದರೆಂಬುದು ಪ್ರಸಿದ್ಧ ವಿಷಯವಾದರೂ ಮಹಾಭಾರತದಲ್ಲಿ ಇನ್ನೂ ಅನೇಕ ರಾಜ್ಯಗಳ ಹೆಸರುಗಳನ್ನು ನೋಡಬಹುದು.  ಮಹಾಭಾರತ ಯುದ್ಧದಲ್ಲಿ ಪಾತ್ರ ವಹಿಸಿದ ರಾಜರುಗಳ ಹೆಸರುಗಳನ್ನು ಹೇಳುವಾಗ ಕರ್ನಾಟಕ, ಕೇರಳ, ದ್ರಾವಿಡ ಮುಂತಾದ ಅನೇಕ ಹೆಸರುಗಳನ್ನು ಭೀಷ್ಮ ಪರ್ವದ 9 ನೆಯ ಅಧ್ಯಾಯದಲ್ಲಿ ಹೇಳಲಾಗಿದೆ.  

ಇದೆಲ್ಲಕ್ಕಿಂತಲೂ ಮಿಗಿಲಾಗಿ ಧಾರ್ಮಿಕವಾದ ಹಿನ್ನೆಲೆಯಲ್ಲಿ ದೇಶ ಪದವನ್ನು ಬಳಸಿರುವುದೇ ಪ್ರಾಚೀನ ಭಾರತೀಯ ಗ್ರಂಥಗಳಲ್ಲಿ ಹೆಚ್ಚು ಕಂಡುಬರುತ್ತದೆ.  ಧರ್ಮವೊಂದೇ ಮಾನವರ ಅಸಾಧಾರಣ ಗುಣವಾದ್ದರಿಂದ ಒಟ್ಟು ಭೂಗೋಳವನ್ನೇ ಧರ್ಮದ ಆಧಾರದ ಮೇಲೆ ವಿಂಗಡಿಸಿ ಆಯಾ ದೇಶಕ್ಕೆ ತಕ್ಕಂತೆ ಧರ್ಮವನ್ನು ನಿಷ್ಕರ್ಷಿಸಿರುವ ವಿಷಯ ಪುರಾಣಾದಿಗಳಲ್ಲೂ ಧರ್ಮಶಾಸ್ತ್ರಗಳಲ್ಲೂ ಕಂಡುಬರುತ್ತದೆ.  ಒಟ್ಟು ಭೂಗೋಳವನ್ನು ಜಂಬೂದ್ವೀಪ ಮುಂತಾದ ಏಳು ದ್ವೀಪಗಳನ್ನಾಗಿ ವಿಂಗಡಿಸಿ ಅವನ್ನು ಮತ್ತೆ ಖಂಡಗಳನ್ನಾಗಿ ವಿಂಗಡಿಸಿ ಎಲ್ಲೆಲ್ಲಿ ಯಾವ ರೀತಿಯ ಧರ್ಮವನ್ನು ಮಾಡಬೇಕು-ಇತ್ಯಾದಿಗಳನ್ನು ಮಹಾಭಾರತಾದಿಗಳಲ್ಲಿ ಹೇಳಲಾಗಿದೆ.

ಸಾಮಾನ್ಯವಾಗಿ ದೇಶವನ್ನು ಅನೂಪ, ಜಾಂಗಲ, ಸಾಧಾರಣ ಎಂದು ಮೂರು ವಿಧವಾಗಿ ವಿಂಗಡಿಸಿರುತ್ತಾರೆ.  ಜಲಸಮೃದ್ಧ ದೇಶವೇ ಅನೂಪ.  ಎರೆಸೀಮೆ ಜಾಂಗಲ. ಉಳಿದವು ಸಾಧಾರಣ.  ಇದಲ್ಲದೆ ಮನುಸ್ಮøತ್ಯಾದಿ ಧರ್ಮಶಾಸ್ತ್ರಗಳಲ್ಲಿ ಕೆಲ ದೇಶಗಳ ವಿಭಾಗವನ್ನು ಧರ್ಮದೃಷ್ಟಿಯಿಂದ ಪ್ರತಿಪಾದಿಸಲಾಗಿದೆ.  ಸರಸ್ವತೀ ಮತ್ತು ದೃಷದ್ವತೀನದಿಗಳ ಮಧ್ಯದಲ್ಲಿ ದೇಶ ಬ್ರಹ್ಮಾವರ್ತ, ಕುರುಕ್ಷೇತ್ರ, ಮತ್ಸ್ಯದೇಶ, ಪಾಂಚಾಲದೇಶ - ಇವು ಬ್ರಹ್ಮರ್ಷಿ ದೇಶ, ಸರಸ್ವತೀ ನದಿ ಅಂತರ್ಧಾನವಾಗುವ ಜಾಗದಿಂದ ಪ್ರಯಾಗಕ್ಕೆ ಪಶ್ಚಿಮದಲ್ಲಿರುವ, ಹಿಮವತ್ಪರ್ವತ ವಿಂಧ್ಯಪರ್ವತಗಳಿಗೆ ಮಧ್ಯದಲ್ಲಿರುವ ದೇಶವೇ ಮಧ್ಯದೇಶ.  ಉತ್ತರಕ್ಕೆ ಹಿಮವತ್ಪರ್ವತ, ದಕ್ಷಿಣಕ್ಕೆ ವಿಂಧ್ಯಪರ್ವತ, ಪೂರ್ವ ಮತ್ತು ಪಶ್ಚಿಮಗಳಲ್ಲಿ ಸಮುದ್ರ-ಇವುಗಳ ಮಧ್ಯದಲ್ಲಿರುವ ದೇಶವೇ ಆರ್ಯವರ್ತ.  ಕೃಷ್ಣಸಾರವೆಂಬ ಒಂದು ಜಾತಿಯ ಜಿಂಕೆ ಎಲ್ಲಿ ಸಹಜವಾಗಿ  ಓಡಾಡುತ್ತಿದೆಯೋ ಆ ದೇಶವೇ ಧರ್ಮಾಚರಣೆಗೆ ತಕ್ಕ ದೇಶ.  ಉಳಿದವು ಮ್ಲೇಚ್ಛ ದೇಶ.  

ವಿಂಧ್ಯಪರ್ವತಕ್ಕೆ ಉತ್ತರದಲ್ಲಿ ಬಾರ್ಹಸ್ಪತ್ಯಮಾನದ ಪಂಚಾಂಗವನ್ನೂ ದಕ್ಷಿಣದಲ್ಲಿ ಚಾಂದ್ರಮಾನವನ್ನೂ ದ್ರಾವಿಡದಲ್ಲಿ ಸೌರಮಾನ ಪಂಚಾಂಗವನ್ನೂ ಬಳಸಬೇಕೆಂಬುದು ಪ್ರಸಿದ್ಧ ವಿಷಯ.

ತೊಲ್‍ಕಾಪ್ಪಿಯಂ ಎಂಬ ಪ್ರಾಚೀನ ತಮಿಳು ವ್ಯಾಕರಣ ಗ್ರಂಥದಲ್ಲಿ ದೇಶಗಳನ್ನು ಅರಣ್ಯ ಪ್ರಾಂತ್ಯ, ಪರ್ವತಪ್ರಾಂತ್ಯ, ಜಲಪ್ರಾಂತ್ಯ, ಎರೆಸೀಮೆ, ಮರುಭೂಮಿ ಎಂದು ಐದು ವಿಧವಾಗಿ ವಿಂಗಡಿಸಿ ಅದರದರ ಗುಣಾದಿಗಳನ್ನು ವಿವರಿಸಲಾಗಿದೆ.  ಅರಣ್ಯಪ್ರಾಂತ್ಯದಲ್ಲಿ ವಿಷ್ಣುವಿನ ಪೂಜೆ ಪ್ರಶಸ್ತ.  ಪರ್ವತ ಪ್ರಾಂತ್ಯದಲ್ಲಿ ಸುಬ್ಯಹ್ಮಣ್ಯನ ಪೂಜೆಯೂ ಜಲಪ್ರಾಂತ್ಯದಲ್ಲಿ ಈಶ್ವರನ ಪೂಜೆಯೂ ಎರೆಸೀಮೆಯಲ್ಲಿ ವರುಣನ ಪೂಜೆಯೂ ಪ್ರಶಸ್ತ. ಮರುಭೂಮಿ ಯಾವ ಕೆಲಸಕ್ಕೂ ಬರುವುದಿಲ್ಲ.  ಅರಣ್ಯಸಮೃದ್ಧ ದೇಶದಲ್ಲಿ ಹಗಲಿನ ಮತ್ತು ಸಂಜೆಯ ಕಾಲ ಪ್ರಶಸ್ತ.  ಪರ್ವತಪ್ರಾಂತ್ಯದಲ್ಲಿ ರಾತ್ರಿ ಪ್ರಶಸ್ತ. ಜಲಸಮೃದ್ಧ ದೇಶದಲ್ಲಿ ಬೆಳಗಿನ ಜಾವ ಪ್ರಶಸ್ತ.  ಎರೆಸೀಮೆಯಲ್ಲಿ ಬ್ರಾಹ್ಮೀಮುಹೂರ್ತ ಪ್ರಶಸ್ತ.  ಇಷ್ಟಲ್ಲದೆ ತೊಲ್‍ಕಾಪ್ಪಿಯಂನಲ್ಲಿ ಅಲ್ಲಲ್ಲಿ ವಾಸಮಾಡುವ ಜನರ ಗುಣ, ವ್ಯಕ್ತಿ ಮುಂತಾದವನ್ನೂ ವಿವರಿಸಲಾಗಿದೆ.  

ವಿe್ಞÁನದಲ್ಲಿ ದೇಶದ ವಿವರಗಳಿಗೆ (ನೋಡಿ- ಆಕಾಶ-ಮತ್ತು-ಕಾಲ)
(ಕೆ.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ